Tuesday 29 March 2016

ಕಾಶ್ಮೀರದಿಂದ ಪಂಡಿತರ ಹೊರವಲಸೆ

ಹದಿಮೂರನೇ ಶತಮಾನದವರೆಗೆ ಹಿಂದೂಗಳೇ ಪ್ರಧಾನವಾಗಿದ್ದ ಕಾಶ್ಮೀರ ಪ್ರದೇಶವು ಪಶ್ಚಿಮದ ಆಕ್ರಮಣಕಾರಿ ಸಿಕಂದರ್ ಲೋದಿಯ ವಶಕ್ಕೆ ಒಳಗಾಗಿ ಅನ್ಯಧರ್ಮೀಯರ ಹಿಂಸೆಗೆ ತುತ್ತಾಯಿತು; ದೇವಾಲಯಗಳ ಭಗ್ನ ಕಾರ್ಯ ಆರಂಭವಾಯಿತು.

ಕಾಶ್ಮೀರದಿಂದ ಪಂಡಿತರ ಹೊರವಲಸೆ ಆರಂಭವಾದುದು ಆಗಲೇ. ಕಾಶ್ಮೀರ ಬ್ರಿಟಿಷರ ವಶಕ್ಕೆ ಬಂದ ಮೇಲೂ ಸಾಮೂಹಿಕ ಮತಾಂತರ, ಪಂಡಿತರ ವಲಸೆ ನಿಲ್ಲಲಿಲ್ಲ.

#######################

ನಮಸ್ತೇ ಶಾರದಾದೇವಿ ಕಾಶ್ಮೀರ ಪುರವಾಸಿನಿ| ತ್ವಾಮಹಂ ಪ್ರಾರ್ಥಯೇ ನಿತ್ಯಂ ವಿದ್ಯಾಂ ಬುದ್ಧಿಂ ಚ ದೇಹಿ ಮೇ’- ಪ್ರತಿದಿನವೂ ಶ್ರದ್ಧಾವಂತ ಭಾರತೀಯರು ‘ಕಾಶ್ಮೀರ ಪುರವಾಸಿನಿ’ ಶಾರದೆಯನ್ನು ವಿದ್ಯಾ, ಬುದ್ಧಿಗಳನ್ನು ದಯಪಾಲಿಸು

ಎಂದು ಬೇಡುತ್ತಾರೆ (ಬೇಡುತ್ತಿದ್ದರು). ಆರು ನೂರು ವರ್ಷಗಳಿಗೂ ಹಿಂದೆ ‘ರಾಜತರಂಗಿಣಿ’ ಕೃತಿ ರಚಿಸಿದ ಕಲ್ಹಣ, ‘ತಂತ್ರಾಲೋಕ’ ಮತ್ತು ‘ಅಭಿನವ ಭಾರತಿ’ಯ ಅಭಿನವ ಗುಪ್ತ, ‘ಬೃಹತ್ಕಥಾ ಮಂಜರಿ’ ಬರೆದ ಕ್ಷೇಮೇಂದ್ರ, ‘ಕಥಾ ಸರಿತ್ಸಾಗರ’ದ ಸೋಮದೇವ, ‘ಚೋರ ಪಂಚ ಶಿಖಾ’ದ ಬಿಲ್ಹಣ, ಅನುತ್ತರೆ ಯೋಗ ತಂತ್ರ’ ರಚಿಸಿದ ವಿದ್ವಾಂಸೆ ಲಕ್ಷ್ಮಿ ಇತ್ಯಾದಿ ‘ಪಂಡಿತ’ ವರ್ಗದ ಕವಿಗಳು, ವಿದ್ವಾಂಸರು, ದಾರ್ಶನಿಕರು ಕಾಶ್ಮೀರದವರು. ದಕ್ಷಿಣ ಭಾರತದ ಅದ್ವೈತ ಸಂಪ್ರದಾಯದ ದಾರ್ಶನಿಕ ಶಂಕರಾಚಾರ‍್ಯರು (7-8ನೇ ಶತಮಾನ) ಶ್ರೀನಗರಕ್ಕೆ ಭೇಟಿ ನೀಡಿ ಅಲ್ಲಿನ ಬೆಟ್ಟದ ಮೇಲೆ ಕೆಲ ಕಾಲವಿದ್ದು ಸೂರ್ತಿ ಪಡೆದವರು. ಸ್ವಾಮಿ ವಿವೇಕಾನಂದರೂ ಕಾಶ್ಮೀರ ಭೇಟಿಯಿಂದ ಸೂರ್ತಿ ಪಡೆದವರು. ಹರಿಪರ್ವತದ ಮೇಲೆ ಕಾಶ್ಮೀರದ ಅಧಿದೇವತೆ ಸಾರಿಣಾದೇವಿ ಇದ್ದಾಳೆ. ಕ್ಷೀರಭವಾನಿ, ರಾಮಚಂದ್ರ, ಲೋಕ ಭವನ್, ಮಾರ್ತಾಂಡ ಸೂರ‍್ಯ ಇತ್ಯಾದಿ ಪವಿತ್ರ ದೇವಾಲಯಗಳು ಅಲ್ಲಿವೆ (ಅಥವಾ ಇದ್ದುವು).

ಉತ್ತರದ ತುದಿಯಲ್ಲಿರುವ ಕಾಶ್ಮೀರವು ಭಾರತದ ಶಿರಸ್ಸಿನಂತಿದ್ದು, ಅದು ಭಾರತೀಯ ಸಂಸ್ಕೃತಿಯ ಮಿದುಳು ಇದ್ದಂತಿತ್ತು. ‘ಕಾಶ್ಮೀರ’, ‘ಶ್ರೀನಗರ’ ಹೆಸರುಗಳೇ ಪಾವಿತ್ರ್ಯದ ಸಂಕೇತ. ಅಂತಹ ಕಾಶ್ಮೀರ ಮುಂದೆ ಏನಾಯ್ತು? ಜ್ಞಾನಗಂಗೆಯ ಕಣಿವೆಯಾಗಿದ್ದ ಅದು ‘ಪಂಡಿತ’ರ ರಕ್ತದ ಕೋಡಿಯಾಯ್ತು. ಈಗ ಏನಾಗಿದೆ? ಮುಂದೆ ಭಾರತ ಏನಾಗಬಹುದು? ಕಲ್ಪಿಸಿಕೊಂಡರೆ ಎದೆ ಝಲ್ಲೆನ್ನುತ್ತದೆ. ಆತ್ಮಬಲಿಯಾಗುವ ಮನಸ್ಸಾಗುತ್ತದೆ; ಹಿಂದೂಗಳಿಗೇ ಹಿಡಿಶಾಪ ಹಾಕಬೇಕೆನ್ನಿಸುತ್ತದೆ.

 ರಾಹುಲ್ ಪಂಡಿತ್ ಎಂಬ ಕಾಶ್ಮೀರ ಮೂಲದ ಲೇಖಕರ ಇಂಗ್ಲಿಷ್ ಆತ್ಮಕಥನದ ಕನ್ನಡಾನುವಾದ ‘ಕದಡಿದ ಕಣಿವೆ’: ಕಾಶ್ಮೀರಿ ಪಂಡಿತರ ನೋವು, ನರಳಾಟ’ ಕೃತಿಯನ್ನು (ಅನುವಾದ: ಬಿ.ಎಸ್. ಜಯಪ್ರಕಾಶ ನಾರಾಯಣ) ಒಮ್ಮೆ ಪರಿಶೀಲಿಸಿದರೆ ಎಲ್ಲ ಭಾರತೀಯ ಸಂಸ್ಕೃತಿಯ ಅಭಿಮಾನಿಗಳಿಗೂ ಮೇಲಿನ ನನ್ನ ಭಾವನೆ ಸುರಿಸಿದರೆ ಆಶ್ಚರ್ಯವಿಲ್ಲ. ಲೇಖಕ ರಾಹುಲ್ ಪಂಡಿತ್ ಒಮ್ಮೆ ಗುಂಡೇಟಿನಿಂದ ಪ್ರಜ್ಞೆ ತಪ್ಪಿ ಎಂಟು ತಿಂಗಳ ಬಳಿಕ ಎಚ್ಚರ ಹೊಂದಿದವರು ಎಂಬುದು ಗಮನಿಸಬೇಕಾದ ಸಂಗತಿ. ಅವರ ಕೃತಿಯ ಸಾರಾಂಶ ಈ ಲೇಖನ.

 ಶುರುವಾಯ್ತು ಹಿಂಸಾಚಾರ:  ಹದಿಮೂರನೇ ಶತಮಾನದವರೆಗೆ ಹಿಂದೂಗಳೇ ಪ್ರಧಾನವಾಗಿದ್ದ ಕಾಶ್ಮೀರ ಪ್ರದೇಶವು ಪಶ್ಚಿಮದ ಆಕ್ರಮಣಕಾರಿ ಸಿಕಂದರ್ ಲೋದಿಯ ವಶಕ್ಕೆ ಒಳಗಾಗಿ ಅನ್ಯಧರ್ಮೀಯರ ಹಿಂಸೆಗೆ ತುತ್ತಾಯಿತು; ದೇವಾಲಯಗಳ ಭಗ್ನ ಕಾರ್ಯ ಆರಂಭವಾಯಿತು. ಮಾರ್ತಾಂಡದ ಸೂರ್ಯ ದೇವಾಲಯ ನಾಶವಾಯಿತು; ಪಂಡಿತರ ಯಜ್ಞೋಪವೀತಗಳನ್ನು ಸುಟ್ಟು ಮತಾಂತರಿಸಲಾಯ್ತು. ಕಾಶ್ಮೀರದಿಂದ ಪಂಡಿತರ ಹೊರವಲಸೆ ಆರಂಭವಾದುದು ಆಗಲೇ. 1589ರಲ್ಲಿ ಅದು ಆ-ನರ ವಶಕ್ಕೆ ಬಂದಾಗ ಆ-ನರು ಪಂಡಿತರ ತಲೆಗಳಿಗೆ ಹೇಸಿಗೆ ಕಟ್ಟಿ ಗೋಣಿಚೀಲಗಳಲ್ಲಿ ಅವರನ್ನು ತುಂಬಿ ಜೀವಂತವಾಗಿ ನೀರಲ್ಲಿ ಮುಳುಗಿಸುತ್ತಿದ್ದರು. ಕಾಶ್ಮೀರ ಬ್ರಿಟಿಷರ ವಶಕ್ಕೆ ಬಂದ ಮೇಲೂ ಸಾಮೂಹಿಕ ಮತಾಂತರ, ಪಂಡಿತರ ವಲಸೆ ನಿಲ್ಲಲಿಲ್ಲ.

1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿದಾಗ ಕಾಶ್ಮೀರವನ್ನು ಆಳುತ್ತಿದ್ದ ದೋಗ್ರಾ ವಂಶದ ರಾಜ ಹರಿಸಿಂಗನ ಕಾಲದಲ್ಲಿ ಕಾಶ್ಮೀರವು ಭಾರತದ ಭಾಗವಾದರೂ ಅದರ ಒಂದು ಚಿಕ್ಕ ಭಾಗವು ಪಾಕಿಸ್ತಾನಕ್ಕೆ ಸೇರಿ ಇಂದಿಗೂ ‘ಪಾಕ್ ಆಕ್ರಮಿತ ಕಾಶ್ಮೀರ’ ಎಂದು ಕರೆಯಲಾಗುತ್ತದೆ. ಆಗ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಹುಟ್ಟಿನಿಂದ ‘ಪಂಡಿತ್’ ಆಗಿದ್ದರೂ, ಮುಸ್ಲಿಮರ ಬಗ್ಗೆ ಅವರಿಗಿದ್ದ ಮೃದುಧೋರಣೆಯಿಂದ ಬಹುಸಂಖ್ಯಾತರಾಗಿದ್ದ ಮುಸ್ಲಿಮರು ಹಿಂದೂಗಳ ಮೇಲೆ ಹಿಂಸಾಚಾರ ಮುಂದುವರಿಸಲು ನಿಮಿತ್ತವಾಯಿತು ಎಂಬ ಆರೋಪವೂ ಇದೆ. ಜಮ್ಮು-ಕಾಶ್ಮೀರದ ಪ್ರಭಾವಿ ರಾಜಕಾರಣಿ ಶೇಖ್ ಅಬ್ದುಲ್ಲಾ, ಪಾಕಿಸ್ತಾನದ ಮಾಜಿ ಪ್ರಧಾನಿ ಭುಟ್ಟೋ ಇವರ ವಂಶಸ್ಥರು ಹಿಂದೆ ‘ಪಂಡಿತ್’ ಆಗಿದ್ದವರು. ‘ಭುಟ್ಟೋ’ ಎಂಬುದು ‘ಭಟ್’ ಎಂಬುದರ ರೂಪಾಂತರ. ಹಿಂದೆ ಕ್ಷೀರ ಭವಾನಿ ದೇವಾಲಯದಂತಹ ಹಿಂದೂ ದೇವಾಲಯಗಳಲ್ಲಿ ಪೂಜೆ, ಪೌರೋಹಿತ್ಯ ಮಾಡುತ್ತಿದ್ದವರೆಲ್ಲ ಬ್ರಾಹ್ಮಣ ಪಂಡಿತ ವರ್ಗದವರೇ. ಶೈವರಾದ ಅವರು ವಿಶೇಷವಾಗಿ ಶಿವರಾತ್ರಿಯ ದಿನ ಶಿವ-ಪಾರ್ವತಿಯರ ಮದುವೆ ಸಂಪ್ರದಾಯವನ್ನು ವೈಭವದಿಂದ ನೆರವೇರಿಸುತ್ತಿದ್ದರು. ಪೂಜೆಗೆ ಅವರು ಲಿಂಗ, ಮಡಕೆ, ಕುಂಭಗಳನ್ನು ಮುಸ್ಲಿಂ ಕುಂಬಾರರಿಂದ ಮಾಡಿಸುತ್ತಿದ್ದರು- ಕುಂಬಾರರೂ ಹಿಂದೊಮ್ಮೆ ಹಿಂದೂಗಳೇ ಆಗಿದ್ದವರು. ಪಂಡಿತರು ಮಾಂಸಾಹಾರಿಗಳಾದರೂ ಗೋಮಾಂಸ ತಿನ್ನುತ್ತಿರಲಿಲ್ಲ; ಮೀನು ಅವರ ಮುಖ್ಯ ಆಹಾರ.

ಸ್ವಾತಂತ್ರ್ಯಾನಂತರದ ಕಾಶ್ಮೀರದ ನೈಜ ಒಳಸ್ಥಿತಿಯನ್ನು ರಾಹುಲ್ ಪಂಡಿತ್ ಬಿಚ್ಚಿಟ್ಟಿದ್ದಾರೆ. ಅದು ಭಾರತದ ಭಾಗವಾಗಿದ್ದರೂ ಅದಕ್ಕೆ ಅದರದೇ ಆದ ಸಂವಿಧಾನಕ್ಕೆ ಅವಕಾಶ ನೀಡಿ, ಭಾರತ ಬಹುದೊಡ್ಡ ತಪ್ಪು ಮಾಡಿತು. ಅಲ್ಲಿ ಮುಸ್ಲಿಮರೇ ಅತಿ ದೊಡ್ಡ ಜನಾಂಗ. ಅವರು  ಪಂಡಿತರನ್ನು ಅಸ್ಪೃಶ್ಯರಂತೆ ಕಂಡರು. ಅವರು ಹೊರಗಟ್ಟಿದ್ದ ಅನೇಕ ಪಂಡಿತರಲ್ಲಿ ಹಲವರು ಜಮ್ಮುವಿನಲ್ಲಿ ನೆಲೆಸಿದರು; ಭಾರತದ ಬೇರೆ ಬೇರೆ ಕಡೆ ಹೋಗಿ ನೆಲೆಸಿದರು. ದೆಹಲಿಯಲ್ಲಿ ಪಂಡಿತರಿಗಾಗಿ ನಿರಾಶ್ರಿತರ ಶಿಬಿರ ತೆರೆಯಲಾಯ್ತು. ಆ ಶಿಬಿರದಲ್ಲಿ ಗಬ್ಬು ನಾತ ತುಂಬಿದ ಹರುಕು ಮುರುಕು ಗುಡಿಸಲುಗಳಲ್ಲಿ ವೃದ್ಧರು, ರೋಗಿಗಳು ನರಳುತ್ತ ಪ್ರಾಣಬಿಟ್ಟರು. ಎಷ್ಟೋ ಜನ ಹಸಿವು ತಡೆಯಲಾರದೆ ಹುತ್ತದ ಹುಳುಗಳನ್ನೇ ಕಿತ್ತರು. ಕಾಶ್ಮೀರದ ಮುಸ್ಲಿಮರ ಏರುದನಿಯ ಕೂಗು-‘ಹಮ್ ಕ್ಯಾ ಚಾಹ್ತೇ, ಆಜಾದೀ...’ (ನಮಗೆ ಬೇಕು ಸ್ವಾತಂ....ತ್ರ್ಯ’). ಭಾರತದಿಂದ ಬೇರೆಯಾಗುವುದೇ ಅವರ ‘ಸ್ವಾತಂತ್ರ್ಯ’. ‘ಭಾರತೀಯ ನಾಯಿಗಳೇ ಇಲ್ಲಿಂದ ತೊಲಗಿ, ತೊಲಗಿ ತೊಲಗಿ’ ಎಂದು ಬೀದಿ ಬೀದಿಗಳಲ್ಲಿ ಕೂಗುತ್ತಿದ್ದರು. ಲೇಖಕ ರಾಹುಲ್ ಪಂಡಿತ್ ಬಾಲಕನಾಗಿದ್ದಾಗ ಅವನ ಸಹಪಾಠಿ ಮುಸ್ಲಿಮರು-‘ಭಾರತೀಯ ಹುಡುಗ ನಮ್ಮಲ್ಲಿದ್ದಾನೆ’ ಎಂದು ಗೇಲಿ ಮಾಡುತ್ತಿದ್ದರು. ಆತ ತನ್ನ ಅಂಗಿ ಮೇಲೆ ರಾಷ್ಟ್ರಧ್ವಜ ಚಿಹ್ನೆಯನ್ನು ಧರಿಸಿದ್ದನ್ನು ಒಬ್ಬ ಮುಸ್ಲಿಂ ಭಿಕ್ಷುಕ ಕಿತ್ತು ಎಸೆದ; ಶಾಲೆಯಲ್ಲಿ ರಾಷ್ಟ್ರಗೀತೆ ಹಾಡಿದ್ದಕ್ಕೆ ಶಿಕ್ಷಕನೊಬ್ಬ ಹೊಡೆದ. ಪಾಕಿಸ್ತಾನದ ವಿರುದ್ಧ ಭಾರತ ಕ್ರಿಕೆಟ್ಟಿನಲ್ಲಿ ಗೆದ್ದು, ‘ಭಾರತ ಗೆಲ್ಲಲಿ, ಗೆದ್ದಿತು’ ಎಂದು ಕೂಗಿದರೆ ಜನರು ಅವರನ್ನು ಶಿಕ್ಷಿಸುತ್ತಿದ್ದರು. ಪುರಾತನವಾದ ಲೋಕಭವನ್ ದೇವಾಲಯವನ್ನು ನಾಶ ಮಾಡಲಾಯ್ತು; ಹೊಸ ದೇವಾಲಯಗಳ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುತ್ತಿರಲಿಲ್ಲ. 1986ರ ಆಗಸ್ಟ್ 15ರಂದು ಭಾರತದ ಸ್ವಾತಂತ್ರ್ಯ ದಿನಾಚರಣೆ ನಡೆದಾಗ ಇಡೀ ಕಾಶ್ಮೀರ ಸ್ತಬ್ಧವಾಗಿತ್ತು. ಈದ್ ಮಿಲಾದ್ ಹಬ್ಬದ ಸಡಗರದ ವೈಭವದ ಮೆರವಣಿಗೆ ನಡೆದಾಗ ಕೇಳಿಸಿದ ಘೋಷಣೆಗಳು- ‘ಇಲ್ಲಿ (ಕಾಶ್ಮೀರದಲ್ಲಿ) ಏನು ಕೆಲಸ ನಡೆಯುತ್ತೆ? ಇಲ್ಲಿ ನಡೆಯುವುದೆಲ್ಲ ಮುಸ್ತಾ-ನ ಆಳ್ವಿಕೆ. ಇಲ್ಲಿ ಪೂರ್ವವೂ ಇಲ್ಲ, ಪಶ್ಚಿಮವೂ ಇಲ್ಲ. ಇಲ್ಲಿ ಏನಿದ್ದರೂ ಇರುವುದು ಇಸ್ಲಾಂ’; ‘ನಾಸ್ತಿಕರ (ಕಾಫಿರರ) ರಾಜ್ಯದಲ್ಲಿ ಭೂಕಂಪವಾಗುತ್ತದೆ. ಈಗ ಮುಜಾಹಿದ್ದೀನರು ಹೋರಾಡಲು ಬರುತ್ತಿದ್ದಾರೆ’. ತಮ್ಮದು ಇಸ್ಲಾಂ ಮತವೇ ಆಳುತ್ತಿರುವ ರಾಷ್ಟ್ರ ಎಂಬುದು ಘೋಷಣೆಯ ಆಶಯ- ಆ ಘೋಷಣೆಗಳು ಗಂಟಲು ಹರಿಯುವಷ್ಟು ಗಟ್ಟಿಯಾಗಿರುತ್ತಿದ್ದವು. ಹಲವೆಡೆ ಪಂಡಿತ್ ವರ್ಗದ ಯುವತಿಯರನ್ನು ಕೆಡಿಸಿ ಮದುವೆಯಾಗಿ ಅವರು ಕರಿಯ ಬುರ್ಖಾ ಧರಿಸುವಂತೆ ಮಾಡಿದರು.

 ಬರ್ಬರ ಕೃತ್ಯಗಳು: ಬರ್‌ಗಾಂವ್ ಜಿಲ್ಲೆಯ ಪ್ರತಿ ಶಾಲೆಯಲ್ಲಿ ‘ಸ್ವಾತಂತ್ರ್ಯ, ಸ್ವಾತಂತ್ರ್ಯ’ ಎಂಬ ಕೂಗು ಕೇಳಿಬರುತ್ತಿತ್ತು. ಓಂಪುರದಲ್ಲಿ ಹುಟ್ಟಿ ಬೆಳೆದ ಭೂಷಣಲಾಲ್ ರೈನಾ ಎಂಬ ಪಂಡಿತರು ಶ್ರೀನಗರದಲ್ಲಿ ಉನ್ನತ ಹುದ್ದೆಯಲ್ಲಿದ್ದಾಗ ಅವರ ಮನೆಗೆ ಶಸಧಾರಿಗಳು ನುಗ್ಗಿದರು. ಅವರ ವೃದ್ಧ ತಾಯಿ-‘ಮಗನನ್ನು ಬಿಡಿ; ಅವನಿಗೆ ಮದುವೆ ಆಗಬೇಕಿದೆ, ನನ್ನನ್ನು ಕೊಲ್ಲಿ’ ಎಂದು ಅಂಗಲಾಚಿದಳು. ಅವಳ ತಲೆಗೆ ಸಲಾಕೆಯಿಂದ ಚುಚ್ಚಿ, ಮಗನ ಬಟ್ಟೆ ಕಿತ್ತು ಮರಕ್ಕೆ ಕಟ್ಟಿ ಹಾಕಿ ಕೊಂದರು. ಎಷ್ಟೋ ಕಡೆ ಹೆಂಡತಿಯರ ಮುಂದೇ ಅವರ ಗಂಡಂದಿರನ್ನು ಕೊಂದರು. ನಿವೃತ್ತ ನ್ಯಾಯಮೂರ್ತಿ ನೀಲಕಂಠ ಗಂಜೂ ಅವರನ್ನು ಹಗಲಲ್ಲೇ ಸಾಯಿಸಿದರು. ಅವರ ಶವವನ್ನು ಯಾವ ಮುಸ್ಲಿಮನೂ ಮುಟ್ಟಲಿಲ್ಲ. ಒಮ್ಮೆ ಹೆಂಗಸರನ್ನು ಮುಸ್ಲಿಮರು ಕೆಡಿಸುವುದನ್ನು ಕಂಡ ತಾಯೊಬ್ಬಳು ತನ್ನ ಮಗನಿಗೆ ಹೇಳಿದ್ದು-‘ನಾನೇ ಚಾಕು ಹಿಡಿದು ನಿನ್ನ ಅಕ್ಕನನ್ನು ಕೊಲ್ಲುತ್ತೇನೆ. ನೀನೂ, ನಿನ್ನ ಅಪ್ಪನೂ ಮುಂದೇನು ಮಾಡಬೇಕು, ಯೋಚಿಸಿ’. ಅನೇಕ ಕಡೆ ಪೊಲೀಸರೇ ಭಯೋತ್ಪಾದಕರ ಪರ ಇದ್ದರು. ಒಮ್ಮೆ ತಮ್ಮ ಮೆರವಣಿಗೆಯೊಂದರಲ್ಲಿ ಮುಸ್ಲಿಮರು ಪಂಡಿತರನ್ನೇ ಮುಂದಾಳುಗಳನ್ನಾಗಿ ನಿಲ್ಲಿಸಿದ್ದರು. ಭಾರತೀಯ ಸೈನಿಕರು ಮೆರವಣಿಗೆ ತಡೆದರೆ ಪಂಡಿತರೇ ಬಲಿಯಾಗಬೇಕು ಎಂಬುದು ಅವರ ಉದ್ದೇಶ. ಮನೆ ಬಾಗಿಲುಗಳಿಗೆ ‘ಜೆಕೆಎಲ್‌ಎಫ್ ’ (ಜಮ್ಮು ಕಾಶ್ಮೀರ ಲಿಬರೇಷನ್ ಫ್ರಂಟ್) ಎಂಬ ಉರ್ದು ಚೀಟಿ ಅಂಟಿಸಿ ‘ಮನೆ ಖಾಲಿ ಮಾಡಿ’ ಎಂಬ ಸೂಚನೆ ನೀಡುತ್ತಿದ್ದರು. ಪಂಡಿತರ ಹೆಂಗಸರು ಹಣೆಗೆ ಕುಂಕುಮ, ಗಂಡಸರು ಜನಿವಾರ ಧರಿಸುವುದನ್ನು ಅವರು ಸಹಿಸುತ್ತಿರಲಿಲ್ಲ. ರಾಷ್ಟ್ರೀಯ ದೃಶ್ಯಮಾಧ್ಯಮಗಳಲ್ಲಿ ಮಹಾಭಾರತ, ರಾಮಾಯಣ ಧಾರಾವಾಹಿಗಳು ಪ್ರದರ್ಶನಗೊಂಡರೆ ತಕ್ಷಣ ವಿದ್ಯುಚ್ಛಕ್ತಿಯನ್ನು ನಿಲ್ಲಿಸುತ್ತಿದ್ದರು. ರಾಹುಲ್ ಪಂಡಿತರ ಮುಸ್ಲಿಂ ಗೆಳೆಯ ಲತೀ- ಗುಂಡಿನ ಚಕಮಕಿಯಲ್ಲಿ ಸತ್ತಾಗ ರಾಹುಲರ ತಾಯಿ ಗಳಗಳನೆ ಅತ್ತರು. ಲತೀ-ನ ಶವಸಂಸ್ಕಾರಕ್ಕೆ ಹಿಂದೂಗಳು ಸೇರಿದಂತೆ ಮುಸ್ಲಿಮರು ಸಾವಿರ ಸಂಖ್ಯೆಯಲ್ಲಿ ಸೇರಿದರು. ಲತೀ-ನ ಚಲನವಲನಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಆರೋಪದ ಮೇಲೆ ಅವನ ಮನೆಯ ಪಕ್ಕದ ಹಿಂದೂ ವ್ಯಕ್ತಿಯೊಬ್ಬನನ್ನು ಮುಸ್ಲಿಮರು ಮರಕ್ಕೆ ನೇತು ಹಾಕಿ ಕೊಂದರು.

 ಮನೆಗೆ ನುಗ್ಗಿದರು: 1990ರ ಮಾರ್ಚ್ ಬಳಿಕ ಪಂಡಿತರ ಕೊಲೆಗಳು ತೀವ್ರವಾದುವು. ಜಮ್ಮು-ಕಾಶ್ಮೀರದ ಹಲವು ನಗರ, ಹಳ್ಳಿಗಳ ಬೀದಿ ಬೀದಿಗಳಲ್ಲಿ ‘ಸ್ವಾತಂತ್ರ್ಯ’ದ ಹೆಸರಿನಲ್ಲಿ ಪಂಡಿತರ ಕೊಲೆ ನಡೆಯಿತು; ಉಗ್ರಗಾಮಿಗಳು ಮಾತ್ರವಲ್ಲ, ಸಾಮಾನ್ಯ ಮುಸ್ಲಿಂ ಪ್ರಜೆಗಳೂ ಕೊಂದರು. ಬಿ.ಕೆ.ಗಂಜೂ ಎಂಬ ಅಧಿಕಾರಿಗೆ ‘ನಿನ್ನ ಹೆಸರು ಹಿಟ್‌ಲಿಸ್ಟ್‌ನಲ್ಲಿದೆ’ ಎಂಬ ಎಚ್ಚರಿಕೆ ನೀಡಿ ಅವರ ಮನೆ ಕಿಟಕಿ ಮುರಿದು ಉಗ್ರರು ಒಳಗೆ ನುಗ್ಗಿದಾಗ ಅವರು ಅಕ್ಕಿ ಡಬ್ಬಿಯಲ್ಲಿ ಅವಿತುಕೊಂಡರು. ಅವರು ಹಾಗೆ ಅವಿತಿದ್ದನ್ನು ಕಣ್ಣಾರೆ ಕಂಡಿದ್ದ ಪಕ್ಕದ ಮನೆಯ ಮುಸ್ಲಿಂ ಮಹಿಳೆ ತಿಳಿಸಿದ್ದರಿಂದ ಅವರನ್ನು ಅಕ್ಕಿ ಡಬ್ಬಿಯಿಂದ ಹೊರಕ್ಕೆಳೆದರು. ಆಗ ಗಂಜೂ ಅವರ ಪತ್ನಿ ‘ನನ್ನನ್ನು ಕೊಲ್ಲಿ’ ಎಂದು ಅಂಗಲಾಚಿ ಬೇಡಿಕೊಂಡರೂ ಉಗ್ರರು-‘ಇಲ್ಲ, ಇಲ್ಲ. ನಿನ್ನನ್ನು ಕೊಲ್ಲುವುದಿಲ್ಲ. ಹೆಣದ ಮೇಲೆ ಬಿದ್ದು ಒದ್ದಾಡಲು ಒಬ್ಬಿಬ್ಬರಾದರೂ ಇರಬೇಕು’ ಎಂದು ಗಂಜೂ ಅವರನ್ನು ಸಾಯಿಸಿದರು. ಸರ್ವಾನಂದ ಕೌಲ್ ‘ಪ್ರೇಮಿ’ ಎಂಬಾತ ದಕ್ಷಿಣ ಕಾಶ್ಮೀರದ ಅನಂತನಾಗ್‌ನಲ್ಲಿದ್ದು ಠಾಕೂರರ ಗೀತಾಂಜಲಿ, ಸಂಸ್ಕೃತ ಭಗವದ್ಗೀತೆ ಇತ್ಯಾದಿಗಳನ್ನು ಉರ್ದು ಭಾಷೆಗೆ ಅನುವಾದಿಸಿದ್ದರು. ಅವರ ಪುಸ್ತಕ ಸಂಗ್ರಹದಲ್ಲಿ ಖುರಾನ್ ಪ್ರತಿ ಕೂಡ ಇದ್ದಿತು. ಅವರು ಹಿಂದೂ, ಮುಸ್ಲಿಂ ಹುಡುಗರಿಗೆ ಪಾಠ ಹೇಳುತ್ತಿದ್ದರು. 1990ರ ಏಪ್ರಿಲ್ 29ರಂದು ಅವರ ಮನೆಗೆ ನುಗ್ಗಿದ ಉಗ್ರರು ಒಡವೆ, ಹಣ ಎಲ್ಲ ದೋಚಿ, ಅವರನ್ನು ಮನೆಯಿಂದ ಹೊರಡಿಸಿದರು. ಮಾರನೆಯ ದಿನ ಅವರು ಹೆಣವಾಗಿ ಮರದಲ್ಲಿ ನೇತಾಡುತ್ತಿದ್ದರು. ಅವರ ಹಣೆಗೆ ಮೊಳೆ ಹೊಡೆದಿದ್ದರು. ಅವರ ಕೈ, ಕಾಲು ಕತ್ತರಿಸಿ ಸಿಗರೇಟಿನಿಂದ ಮೈಯನ್ನು ಅಲ್ಲಲ್ಲಿ ಸುಟ್ಟಿದ್ದರು. ಅವರ ಜೊತೆ ಅವರ ಮಗನನ್ನೂ ಕೊಂದರು. ಉತ್ತರ ಕಾಶ್ಮೀರದ ತಿಜರ್ ಎಂಬ ಹಳ್ಳಿಯ ಗಿರಿಜಾ ಎಂಬಾಕೆ ಪ್ರತಿ ತಿಂಗಳು ಸಂಬಳ ಪಡೆಯಲು ಬಂಡಿಪುರಕ್ಕೆ ಬಂದು ಮುಸ್ಲಿಂ ಗೆಳತಿಯ ಮನೆಯಲ್ಲಿ ರಾತ್ರಿ ಕಳೆದು ವಾಪಸಾಗುತ್ತಿದ್ದಳು. ಅವಳನ್ನು ನಾಲ್ಕಾರು ಉಗ್ರರು ಅಪಹರಿಸಿ ಅತ್ಯಾಚಾರ ಮಾಡಿ, ಅವಳ ಇಡೀ ದೇಹವನ್ನು ವಿದ್ಯುಚ್ಛಕ್ತಿಯ ಗರಗಸಕ್ಕೆ ಸೇರಿಸಿ ತುಂಡು ತುಂಡು ಮಾಡಿದರು. ಎಷ್ಟೋ ಕಡೆ ಗಾಯಾಳು ಹಿಂದೂಗಳಿಗೆ ಚಿಕಿತ್ಸೆ ನೀಡಲು ಮುಸ್ಲಿಂ ವೈದ್ಯರು ನಿರಾಕರಿಸಿದರು.

2012ರಲ್ಲಿ ಶ್ರೀನಗರದಲ್ಲಿ ವಾಸವಾಗಿದ್ದ ಕೆಲವು ಪಂಡಿತರು ಮೂರು ಬಾರಿ ಅಪಹರಣಕ್ಕೊಳಗಾಗಿ ಹೇಗೋ ಬಚಾವಾಗಿ ಬಂದಿದ್ದರು. ಒಬ್ಬರ ಮನೆಯಲ್ಲಿ ಅಮೂಲ್ಯ ಪುಸ್ತಕಗಳ ಹಸ್ತಪ್ರತಿಗಳು ಇದ್ದವು. ಅವರು ಮುಸ್ಲಿಮರು ಮಾರಿದ್ದ ಹಿಂದೂ ಧರ್ಮದ ಪುಸ್ತಕ ಪ್ರತಿಗಳನ್ನು ಒಂದು ಕೆ.ಜಿ.ಗೆ 20 ರೂ. ಕೊಟ್ಟು ಕೊಂಡಿದ್ದರು. ಅವರು ರಾತ್ರಿಯೆಲ್ಲ ಭಯದಿಂದ ಬದುಕುತ್ತಿದ್ದರು. ಹಗಲು ಕೂಡ ಹೆಚ್ಚು ಹೊರಗೆ ಹೋಗುತ್ತಿರಲಿಲ್ಲ. ಹೋದಾಗ ತಮ್ಮ ಮನೆಯ ಲಕ್ಷ್ಮೀ ಎಂಬ ಹಸು ಕಣ್ಣೀರು ಸುರಿಸುತ್ತದೆ ಎಂದು ಅವರು ಹೇಳಿಕೊಂಡಿದ್ದರು. ಒಂದು ದಿನ ದಾರಿಯಲ್ಲಿ ಮುಸ್ಲಿಮರು ‘ಎಲ್ಲರೂ ಮನೆಗೆ ಓಡಿ ಹೋಗಿ’ ಎಂದು ಕೂಗಿ ಎಚ್ಚರಿಸಿದ್ದನ್ನು ಕೇಳಿದ ಅವರು ಮನೆಗೆ ಬಂದ ತಕ್ಷಣ ಕೆಲವು ಮುಸ್ಲಿಮರು ಅವರ ತಲೆಗೂದಲು ಕತ್ತರಿಸಿ, ಹೊಟ್ಟೆಗೆ ಕತ್ತಿಯಿಂದ ಇರಿದರು; ಹೆಂಗಸರು ಕೈಲಿದ್ದ ಉಂಗುರಗಳನ್ನು ಕಿತ್ತು ಕೆಳಕ್ಕೆ ಹಾಕಿದರು. ಕೆಲವು ಹೆಂಗಸರ ಮೊಲೆಗಳನ್ನು ಕತ್ತರಿಸಿದರು, ಜನರನ್ನು ನಿರ್ದಯವಾಗಿ ಕೊಂದರು. ಮನೆಗಳೆಲ್ಲ ಬೆಂಕಿಯಿಂದ ಸುಟ್ಟು ಗಗನವೆಲ್ಲ ಹೊಗೆಯಿಂದ ಮಂಕಾಯಿತು. ಸುಟ್ಟು ಹೋದ ಕೃತಿಗಳಲ್ಲಿ ಕಲ್ಹಣನ ‘ರಾಜತರಂಗಿಣಿ’ ಒಂದು (ಇದು ಅಚ್ಚಾಗಿ ಪ್ರಸಿದ್ಧವಾಗಿದೆ). ಒಂದು ಮನೆಗೆ ನುಗ್ಗಿದ ದಾಳಿಕೋರರು ‘ಕಲ್ಮಾ’ (ಮುಸ್ಲಿಂ ಧಾರ್ಮಿಕ ವಿಧಾನದ ಸೂತ್ರಗಳು) ಹೇಳದ್ದಕ್ಕೆ ಇಬ್ಬರು ಹುಡುಗರನ್ನು ಕೊಂದು ಮನೆಗೆ ಬೆಂಕಿ ಇಟ್ಟರು. ಅವರ ಸುಟ್ಟ ಶವಗಳನ್ನು ಹೊರತರಲು ಅವರ ತಾಯಿಗೇ ಆಜ್ಞೆ ಮಾಡಿದರು. ಬಾರಾಮುಲ್ಲಾದ ಸಿನಿಮಾ ಮಂದಿರಕ್ಕೆ ನೂರಾರು ಮಹಿಳೆಯರನ್ನು ಎಳೆದೊಯ್ದು ಕೂಡಿ ಹಾಕಿ ಅತ್ಯಾಚಾರ ಮಾಡಿದ್ದಲ್ಲದೆ ಹಲವರನ್ನು ರಾವಲ್ಪಿಂಡಿ, ಪೇಶಾವರಗಳಿಗೆ ಮಾರಿದರು. ಕೆಲವು ಸೀಯರು ಅತ್ಯಾಚಾರ ಸಹಿಸದೆ ಝೀಲಂ ನದಿಗೆ ಹಾರಿ ಸತ್ತರು. ಒಂದೆರಡು ಕಡೆ ವಿರಳವಾಗಿ ಮುಸ್ಲಿಂ ಆಗಿದ್ದ ಪಂಡಿತರು ತಮ್ಮ ಮಾತೃಧರ್ಮಕ್ಕೆ ಮರಳಿದರು. ನೀಲಾದ್ರಿ ಕಣಿವೆಯ ಶಾರದಾ ದೇವಾಲಯದ ಸುಮಾರು ನೂರು ಭಕ್ತರನ್ನು ಕೊಲ್ಲಲಾಯಿತು.

 ಭಾರತದ ಮಿದುಳಾಗಿತ್ತು: ಎಷ್ಟೋ ಪಂಡಿತ ಮಕ್ಕಳು ಶಾಲೆಗಳಲ್ಲಿ ಗಣಿತ, ವಿಜ್ಞಾನಗಳಿಗಿಂತ ಇಸ್ಲಾಮಿಕ್ ಧರ್ಮಾಧ್ಯಯನ ಮಾಡಬೇಕಿತ್ತು. ಜಮ್ಮು-ಕಾಶ್ಮೀರದ ಪಂಡಿತರ ಜನಸಂಖ್ಯೆ 1941ರಲ್ಲಿ ಶೇ.15ಇದ್ದುದು 1981ರಲ್ಲಿ ಶೇ.5ಕ್ಕೆ ಕುಸಿದಿತ್ತು. 2012ರಲ್ಲಿಯೂ ಪಂಡಿತರು ಅನೇಕ ನಿರಾಶ್ರಿತರ ಶಿಬಿರಗಳಲ್ಲಿ ಕೊಳೆಯುವ ಹೆಣಗಳಂತೆ ಬದುಕುತ್ತಿದ್ದರು. ಕಾಶ್ಮೀರ ಹಿಂದೆ ಭಾರತದ ಮಿದುಳಾಗಿತ್ತು, ಬೌದ್ಧಿಕ ಕೇಂದ್ರವಾಗಿತ್ತು ಎಂಬುದನ್ನು ಜ್ಞಾಪಿಸಿಕೊಂಡರೆ ಆಗುವ ದುಃಖ ಅಷ್ಟಿಷ್ಟಲ್ಲ. ಇಂತಹ ಭಾರತದಲ್ಲಿ ನಾನಿರಬೇಕೇ ಎಂಬ ವಿಷಾದದ ಭಾವನೆಯೂ ಸುಳಿದಿದೆ.

ಮೇಲಿನದು ರಾಹುಲ್ ಪಂಡಿತರ ‘ಕದಡಿದ ಕಣಿವೆ’ ಕೃತಿಯ ಅತಿಸ್ಥೂಲ ಚಿತ್ರ. ಆ ಕೃತಿ ಓದುವಗ ನಾನು ಪ್ರತಿ ಎರಡು, ಮೂರು ಪುಟ ಓದುವಷ್ಟರಲ್ಲಿ ಮನಶಾಂತಿ ಅಲ್ಪಸ್ವಲ್ಪ ಕದಡಿ ಓದನ್ನು ಸ್ವಲ್ಪ ಹೊತ್ತು ನಿಲ್ಲಿಸುತ್ತಿದ್ದೆ. 2016ರಲ್ಲೂ ಅದೇ ಹಿಂದಿನ ಪರಿಸ್ಥಿತಿ ಮುಂದುವರಿದಿದೆ. ಪತ್ರಿಕೆಗಳಲ್ಲಿ ಆ ವಿಷಯವಾಗಿ ಬರುವ ವರದಿಗಳು ವಾಸ್ತವದ ಒಂದು ಭಾಗ ಮಾತ್ರ. ಕೊನೆಯಲ್ಲಿ ನನ್ನ ಕೆಲವು ಗುಣುಗುಗಳು-

 ‘ಸತ್ಯಂ ವದ, ಧರ್ಮಂ ಚರ’ (ಸತ್ಯವನ್ನು ಹೇಳು, ಧರ್ಮವನ್ನು ಬದುಕು)(-ಸಂಸ್ಕೃತೋಕ್ತಿ) ‘ಕ್ಷುದ್ರಂ ಹೃದಯ ದೌರ್ಬಲ್ಯಂ, ತ್ಯಕ್ತ್ವೋತ್ತಿಷ್ಠ ಪರಂತಪ’ (ಹೃದಯ ದೌರ್ಬಲ್ಯ -ಹೇಡಿತನ ಹೀನವಾದುದು; ಅದನ್ನು ತ್ಯಜಿಸಿ ಮೇಲೇಳು, ಓ ಶೂರ)(-ಕೃಷ್ಣನಿಂದ ಅರ್ಜುನನಿಗೆ ಉಪದೇಶ) ‘ಏಳು ಎದ್ದೇಳು, ಗುರಿ ತಲುಪುವವರೆಗೆ ವಿಶ್ರಮಿಸದಿರು’(ಸ್ವಾಮಿ ವಿವೇಕಾನಂದ)

           ‘ನ್ಯಾಯ ನಿಷ್ಠುರಿ, ದಾಕ್ಷಿಣ್ಯಪರ ನಾನಲ್ಲ|

ಲೋಕ ವಿರೋಧಿ, ಶರಣನಾರಿಗಂಜುವನಲ್ಲ|’(-ಬಸವಣ್ಣ) ‘ನಾವು ಹಿಂದೂಗಳು ಧರ್ಮಕ್ಕಾಗಿ ಪ್ರಾಣ ಕೊಡಬೇಕು ಎನ್ನುತ್ತೇವೆ. ಮುಸ್ಲಿಮರು ಧರ್ಮಕ್ಕಾಗಿ ಪ್ರಾಣ ತೆಗೆಯಬೇಕು ಎನ್ನುತ್ತಾರೆ-ಇಷ್ಟೇ ಅಂತರ’(-ಕುವೆಂಪು, ಸಿ.ಪಿ.ಕೆ. ಅವರಿಂದ ಸಂದರ್ಶನ) ‘ಅಹಿಂಸಾ ಪರಮೋ ಧರ್ಮಃ , ಧರ್ಮ ಹಿಂಸಾ ತಧೈವ ಚ’ (ಅಹಿಂಸೆಯು ಪರಮ ಧರ್ಮ; ಧರ್ಮ ರಕ್ಷಣೆಗಾಗಿ ಮಾಡುವ ಹಿಂಸೆಯೂ ಪರಮ ಧರ್ಮವೇ)(-ಸಂಸ್ಕೃತೋಕ್ತಿ)

(ಲೇಖಕರು ಹಿರಿಯ ಸಂಶೋಧಕರು)

 CHIDANANDHA MURTHY 🎥🔍

Sunday 13 March 2016

Nice article

ಮೂತ್ರಪಿಂಡ ಸಂರಕ್ಷಣೆಗೆ ಸುವರ್ಣಸೂತ್ರ

10 Mar 2016

ಕಿಡ್ನಿ ಸಮಸ್ಯೆ ಸರ್ಕಾರಕ್ಕೂ ಸವಾಲು

ಜೀವನಶೈಲಿ, ಮಧುಮೇಹ ಮತ್ತು ರಕ್ತದ ಒತ್ತಡ ಕಾಯಿಲೆಗಳಿಂದ ಕಿಡ್ನಿ ವೈ ಫಲ್ಯ ಪ್ರಕರಣಗಳು ಹೆಚ್ಚುತ್ತಿವೆ. ಬೇಡಿಕೆಗೆ ಅನುಗುಣವಾಗಿ ಡಯಾಲಿಸಿಸ್ ಘಟಕ ಸ್ಥಾಪನೆ ಸರ್ಕಾರಕ್ಕೆ ಸವಾಲಾಗಿದೆ.ನಗರದಂತೆ ಗ್ರಾಮೀಣ ಪ್ರದೇಶದ ಜನರಲ್ಲೂ ಕಿಡ್ನಿ ವೈ ಫಲ್ಯತೆ ಪ್ರಕರಣಗಳು ಕಾಣಿಸಿಕೊಳ್ಳುತ್ತಿದ್ದು, ತೀವ್ರ ತರದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವವರು ವಾರದಲ್ಲಿ 2 ರಿಂದ 3 ಬಾರಿ ಡಯಾಲಿಸಿಸ್‌ಗೆ ಒಳಗಾಗಬೇಕಾಗುತ್ತದೆ. ರೋಗಿಗಳ ಅನುಪಾತಕ್ಕೆ ಹೋಲಿಸಿದರೆ ಈಗಿರುವ ಡಯಾಲಿಸಿಸ್ ಕೇಂದ್ರಗಳಲ್ಲಿ ಚಿಕಿತ್ಸೆ ನೀಡುವುದು ಕಷ್ಟವಾಗಿದೆ.

ಕಿಡ್ನಿ ಬಗ್ಗೆ ಇಂದು ಮಾತ್ರ ಯೋಚಿಸಿದರೆ ಖಂಡಿತಾ ಸಾಲದು ಎನ್ನುವ ಸ್ಥಿತಿ ನಿರ್ಮಾಣವಾಗುತ್ತಿದೆ. ಒತ್ತಡದ ಹಾಗೂ ಬದಲಾಗುತ್ತಿರುವ ಜೀವನ ಮತ್ತು ಆಹಾರಶೈಲಿಯಿಂದಾಗಿ ಹೆಚ್ಚಿನವರಲ್ಲಿ ಮೂತ್ರಪಿಂಡ (ಕಿಡ್ನಿ) ಸಮಸ್ಯೆಕಾಣಿಸಿಕೊಳ್ಳುತ್ತಿದೆ. ಹೀಗಾಗಿ ಪ್ರತಿದಿನವೂ ಕಿಡ್ನಿ ಬಗ್ಗೆ ಜಾಗೃತಿ ಮೂಡಿಸಬೇಕಾದ ಅಗತ್ಯ ಹೆಚ್ಚಾಗಿದೆ. ಮೂತ್ರಪಿಂಡದ ಮೇಲೊಂದು ಕ್ಷ-ಕಿರಣ.

ನಮ್ಮ ದೇಹವನ್ನು ಸುಸ್ಥಿತಿಯಲ್ಲಿಡಲು ಅನೇಕ ಮಹತ್ತರ ಕಾರ್ಯಗಳನ್ನು ಮಾಡುವ ಅದ್ಭುತ ಹಾಗೂ ಸಂಕೀರ್ಣ ಅಂಗ ಮೂತ್ರಪಿಂಡ (ಕಿಡ್ನಿ). ರಕ್ತದಲ್ಲಿನ ತ್ಯಾಜ್ಯ, ವಿಷಕಾರಿ ಪದಾರ್ಥ ಹಾಗೂ ಹೆಚ್ಚುವರಿ ನೀರನ್ನು ಹೊರಹಾಕುವುದು ಇದರ ಪ್ರಮುಖ ಕಾರ್ಯ. ರಕ್ತದೊತ್ತಡ ನಿಯಂತ್ರಿಸಲು, ಕೆಂಪು ರಕ್ತಕಣಗಳನ್ನು ಉತ್ಪಾದಿಸಲು ಹಾಗೂ ಮೂಳೆಗಳನ್ನು ಆರೋಗ್ಯಕರವಾಗಿಡಲು ಕೂಡ ಮೂತ್ರಪಿಂಡ ನೆರವಾಗುತ್ತದೆ.ರಕ್ತದೊತ್ತಡ ಸದಾಕಾಲ ಸಮಪ್ರಮಾಣದಲ್ಲಿರುವಂತೆ ನಮ್ಮ ದೇಹದಲ್ಲಿನ ಉಪ್ಪು ಹಾಗೂ ನೀರನ್ನು ಬಹುಎಚ್ಚರಿಕೆಯಿಂದ ಮೂತ್ರಪಿಂಡವು ನಿಯಂತ್ರಿಸುತ್ತದೆ.

ಮಧುಮೇಹ, ತೀವ್ರ ರಕ್ತದೊತ್ತಡ ಹಾಗೂ ಮೂತ್ರಪಿಂಡದ ಹರಳುಗಳಿಂದಾಗಿ ಮೂತ್ರಪಿಂಡ ಹಾನಿಯಾಗುವ ಸಂಭವ ಹೆಚ್ಚು. ಮಧುಮೇಹದ ರೀತಿಯಲ್ಲಿಯೇ ಮೂತ್ರಪಿಂಡದ ಹರಳುಗಳು ಸಾಮಾನ್ಯ ಕಾಯಿಲೆ ಎಂಬಂತಾಗಿದೆ. ಶೇ.12 ಪುರುಷರು ಹಾಗೂ ಶೇ.7 ಮಹಿಳೆಯರಲ್ಲಿ ಮೂತ್ರಪಿಂಡದ ಹರಳುಗಳು ಕಂಡುಬರುತ್ತವೆ. ಬೊಜ್ಜಿನಿಂದಾಗಿ ಇತ್ತೀಚಿನ ವರ್ಷಗಳಲ್ಲಿ ಮಹಿಳೆಯರಲ್ಲೂ ಈ ಹರಳುಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿವೆ. ಅಧಿಕ ಮಾಂಸಾಹಾರ ಸೇವನೆಯಿಂದಲೂ ಹರಳುಗಳು ಉಂಟಾಗುತ್ತವೆ. ಹೆಚ್ಚು ಉಪ್ಪಿನಂಶವಿರುವ ಆಹಾರ ಪದಾರ್ಥಗಳ ಸೇವನೆ ಕೈಬಿಡುವ ಮೂಲಕ ಹರಳು ಉಂಟಾಗುವುದನ್ನು ನಿಯಂತ್ರಿಸಬಹುದಾಗಿದೆ.

ಚಿಕಿತ್ಸಾ ವಿಧಾನ: ಮೂತ್ರ ವಿಸರ್ಜನೆ ವೇಳೆ ನೋವು ಅಥವಾ ರಕ್ತ ಕಾಣಿಸಿಕೊಳ್ಳುವುದು ಮೂತ್ರಪಿಂಡದ ಹರಳು ಆಗಿರುವುದರ ಪ್ರಮುಖ ಲಕ್ಷಣ. 4 ಮಿ.ಮೀ.ಗಿಂತ ಕಡಿಮೆ ಗಾತ್ರದ ಹರಳುಗಳಿದ್ದರೆ ಸಾಮಾನ್ಯವಾಗಿ ಮೂತ್ರದ ಮೂಲಕ ಅವುಗಳನ್ನು ಹೊರಹೋಗುವಂತೆ ಔಷಧ ನೀಡಲಾಗುತ್ತದೆ. ಗಾತ್ರ ಸಣ್ಣದಾಗಿದ್ದರೆ, ಶಾಕ್ ವೇವ್ ಲಿತೊಟ್ರಿಪ್ಸಿ ಚಿಕಿತ್ಸೆ ನೀಡಲಾಗುತ್ತದೆ. ಎರಡನೆಯದು ಯುರಿಟೆರೊಸ್ಕೊಪಿ. ಮೂತ್ರ ವಿಸರ್ಜನಾ ನಾಳದ ಮೂಲಕ ದರ್ಶಕಯಂತ್ರ ಕಳುಹಿಸಿ ಹರಳುಗಳನ್ನು ಒಡೆದುಹಾಕಲಾಗುತ್ತದೆ.ದೊಡ್ಡ ಗಾತ್ರದ ಹರಳುಗಳನ್ನು ಎಂಡೊಸ್ಕೊಪಿಕ್ (ಅಂತರ್‌ದರ್ಶಕೀಯ) ಶಸಚಿಕಿತ್ಸೆ ಮೂಲಕ ತೆಗೆಯಲಾಗುತ್ತದೆ. ಆದರೆ, ಹೋಲಿಯಂ ಲೇಸರ್ ಮೂಲಕ ಹರಳುಗಳನ್ನು ಒಡೆಯುವುದು ಇತ್ತೀಚಿನ ಆಧುನಿಕ ಚಿಕಿತ್ಸೆಯಲ್ಲಿ ಹೆಚ್ಚು ಪ್ರಚಲಿತವಾಗಿದೆ.

ಆಹಾರ ಶೈಲಿ ಮೇಲೆ ನಿಗಾ ಇರಲಿ

        ದೇಹವನ್ನು ಸುಸ್ಥಿತಿಯಲ್ಲಿ, ಸಕ್ರಿಯವಾಗಿಟ್ಟುಕೊಳ್ಳಬೇಕು.

          ರಕ್ತದ ಸಕ್ಕರೆಮಟ್ಟವನ್ನು ಸದಾ ನಿಯಂತ್ರಣ ದಲ್ಲಿಟ್ಟುಕೊಳ್ಳಬೇಕು.

          ರಕ್ತದೊತ್ತಡದ ಮೇಲೆ ನಿಗಾ ವಹಿಸಬೇಕು.

          ಆರೋಗ್ಯಪೂರ್ಣ ಆಹಾರ ಸೇವಿಸಬೇಕು.

          ದೇಹದ ತೂಕವನ್ನು ನಿಯಂತ್ರಣದಲ್ಲಿಡಬೇಕು.

          ದ್ರವ ಸೇವನೆ ನಿಯಮಿತವಾಗಿರುವಂತೆ ನೋಡಿಕೊಳ್ಳಬೇಕು.

          ಧೂಮಪಾನ ಮಾಡಬಾರದು.

          ಅನಗತ್ಯವಾಗಿ, ನಿರಂತರವಾಗಿ ಮಾತ್ರೆಗಳ ಸೇವನೆ ಮಾಡಬಾರದು.

ಮಾರ್ಚ್ 10 ವಿಶ್ವ ಮೂತ್ರಪಿಂಡ ದಿನ

ಹುಬ್ಬಳ್ಳಿಯ ಮೂತ್ರಶಾಸಜ್ಞ ಡಾ.ಅಶ್ವಿನ್ ಕುಲಕರ್ಣಿ ಅವರು ಕಿಡ್ನಿಯ ಮಹತ್ವ, ಕಾರ್ಯವೈಖರಿಯನ್ನು ಇಲ್ಲಿ ವಿವರಿಸಿದ್ದಾರೆ.

ಹೆಚ್ಚುತ್ತಿರುವ ಕಿಡ್ನಿ ಸಮಸ್ಯೆ, ಸಿಗುತ್ತಿಲ್ಲ ಡಯಾಲಿಸಿಸ್

ಸರ್ಕಾರಿ ಆಸ್ಪತ್ರೆಗಳಲ್ಲಿ ಕೇವಲ 65 ಡಯಾಲಿಸಿಸ್ ಕೇಂದ್ರ ಸಹಸ್ರಾರು ಬಡರೋಗಿಗಳ ಪರದಾಟವಿಲಾಸ ಮೇಲಗಿರಿ ರಾಜ್ಯದಲ್ಲಿ ಕಿಡ್ನಿ ಸಮಸ್ಯೆ ಪ್ರಮಾಣ ದಿನೇದಿನೆ ಹೆಚ್ಚುತ್ತಿದೆ. ಆದರೆ ಬಡವರ ನೆರವಿಗೆ ಬರಬೇಕಾದ ಸರ್ಕಾರಿ ಆಸ್ಪತ್ರೆಗಳಲ್ಲಿರುವುದೇ ಕೇವಲ 65 ಡಯಾಲಿಸಿಸ್ ಕೇಂದ್ರಗಳು ಮಾತ್ರ.ರಾಜ್ಯದಲ್ಲಿ 2 ಲಕ್ಷಕ್ಕೂ ಹೆಚ್ಚು ಮಂದಿ ಕಿಡ್ನಿ ವೈ ಫಲ್ಯಕ್ಕೆ ಒಳಗಾಗಿದ್ದು, ಇವರಿಗೆ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಸೇರಿ ಒಟ್ಟು 220 ಡಯಾಲಿಸಿಸ್ ಕೇಂದ್ರಗಳಿವೆ. ಆದರೆ ಇವು ಸಾಕಾಗುತ್ತಿಲ್ಲ.

ಸಿಗುತ್ತಿಲ್ಲ ಚಿಕಿತ್ಸೆ: ನಾನಾ ಕಾರಣಗಳಿಂದ ಕಿಡ್ನಿ ವೈ ಫಲ್ಯಗೊಂಡ ರೋಗಗಳ ಸಂಖ್ಯೆ ರಾಜ್ಯದಲ್ಲಿ ದಿನೇ ದಿನೆ ಹೆಚ್ಚುತ್ತಿದೆ. ಈ ರೋಗಿಗಳ ಸಂಖ್ಯೆಗೆ ಅನುಗುಣವಾಗಿ ಡಯಾಲಿಸಿಸ್ ಕೇಂದ್ರಗಳಿಲ್ಲ. ಇರುವ ಬಹುತೇಕ ಘಟಕಗಳು ಖಾಸಗಿ ಸ್ವತ್ತಾಗಿವೆ. ಹಾಗಾಗಿ ಬಡ ರೋಗಿಗಳಿಗೆ ಚಿಕಿತ್ಸೆ ಬಲು ದೂರವಾಗಿದೆ.21 ಜಿಲ್ಲಾ, 9 ಮೆಡಿಕಲ್ ಕಾಲೇಜು ಆಸ್ಪತ್ರೆ ಹಾಗೂ 35 ತಾಲೂಕು ಆಸ್ಪತ್ರೆಗಳಲ್ಲಿ ಡಯಾಲಿಸಿಸ್ ಘಟಕಗಳಿವೆ. ಜಿಲ್ಲಾ ಆಸ್ಪತ್ರೆಯಲ್ಲಿರುವ ಡಯಾಲಿಸಿಸ್ ಘಟಕಗಳು ತಲಾ 10 ಹಾಸಿಗೆಗಳನ್ನು ಹೊಂದಿವೆ. ಆದರೆ, ತಾಲೂಕು ಆಸ್ಪತ್ರೆಗಳಲ್ಲಿ ಕನಿಷ್ಠ 2ರಿಂದ 4 ಹಾಸಿಗೆಗಳಿವೆ.

ನೋಂದಣಿಗೆ ಕಾಯಲೇಬೇಕು: ಕಡಿಮೆ ಡಯಾಲಿಸಿಸ್ ಘಟಕ ಹಾಗೂ ಹಾಸಿಗೆಯಿಂದಾಗಿ ಕಿಡ್ನಿ ವೈ ಫಲ್ಯಕ್ಕೆ ಒಳಗಾದ ರೋಗಿಗಳು ತಮ್ಮ ಹೆಸರನ್ನು ನೋಂದಣಿ ಮಾಡಿ ಚಿಕಿತ್ಸೆಗಾಗಿ ಕಾಯಬೇಕಾದ ಪರಿಸ್ಥಿತಿ ತಲೆದೋರಿದೆ.146 ತಾಲೂಕುಗಳಲ್ಲಿ ತಾಲೂಕು ಆಸ್ಪತ್ರೆಗಳಿದ್ದು, ಈ ಪೈಕಿ 35ನ್ನು ಹೊರತುಪಡಿಸಿದರೆ, ಉಳಿದ 111 ತಾಲೂಕುಗಳಲ್ಲಿ ಡಯಾಲಿಸಿಸ್ ಕೇಂದ್ರಗಳನ್ನು ತೆರೆಯಬೇಕಿದೆಪ್ರತಿನಿತ್ಯ ಬಹುತೇಕ 560-600 ರೋಗಿಗಳು ಸರ್ಕಾರಿ ಡಯಾಲಿಸಿಸ್ ಕೇಂದ್ರಗಳಿಗೆ ಭೇಟಿಕೊಡುತ್ತಾರೆ. ಮತ್ತೆ ಕೆಲವರು ಖಾಸಗಿಡಯಾಲಿಸಿಸ್ ಕೇಂದ್ರಗಳ ಮೊರೆ ಹೋಗುತ್ತಾರೆ. ದುಬಾರಿ ವೆಚ್ಚ ಭರಿಸದೆ ಅನೇಕ ರೋಗಿಗಳು ಚಿಕಿತ್ಸೆಯಿಂದ ದೂರವೇ ಉಳಿದಿದ್ದಾರೆ.

1 ಹಾಸಿಗೆಗೆ 10 ಲಕ್ಷ ರೂ. ವೆಚ್ಚ

ಡಯಾಲಿಸಿಸ್‌ನ ಒಂದು ಹಾಸಿಗೆಗೆ ಸರ್ಕಾರ 10 ಲಕ್ಷ ರೂ. ವ್ಯಯಿಸಬೇಕಿದೆ. ಒಂದು ಬಾರಿಯ ಡಯಾಲಿಸಿಸ್‌ಗೆ ಕನಿಷ್ಠ 4 ಗಂಟೆ ಸಮಯ ಬೇಕಾಗುತ್ತದೆ. 10 ಯಂತ್ರಗಳನ್ನು ಒಳಗೊಂಡ ಡಯಾಲಿಸಿಸ್ ಕೇಂದ್ರಗಳಲ್ಲಿ ದಿನಕ್ಕೆ 25-30 ರೋಗಿಗಳನ್ನು ಮಾತ್ರ ಚಿಕಿತ್ಸೆಗೆ ಒಳಪಡಿಸಬಹುದು.

ಕೇಂದ್ರ ಆರಂಭಕ್ಕೆ ನಿರ್ಧಾರ

2016-17ನೇ ಸಾಲಿನಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದಡಿ ಜಿಲ್ಲೆಗೆ ಒಂದು ತಾಲೂಕು ಆಯ್ಕೆ ಮಾಡಿಕೊಂಡು ಅಲ್ಲಿ ಡಯಾಲಿಸಿಸ್ ಘಟಕ ಸ್ಥಾಪಿಸಲು ಉದ್ದೇಶಿಸಲಾಗಿದೆ. ಉಳಿದ ಜಿಲ್ಲೆಗಳಲ್ಲಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಡಿ ಡಯಾಲಿಸ್ ಕೇಂದ್ರವನ್ನು ಆರಂಭಿಸಲು ಸರ್ಕಾರ ತೀರ್ಮಾನಿಸಿದೆ.

ಹಾಸಿಗೆ ಹೆಚ್ಚಳಕ್ಕೂ ಚಿಂತನೆ

ತಾಲೂಕು ಘಟಕಗಳಲ್ಲಿ ಪ್ರಸ್ತುತ 2 ರಿಂದ 4 ಹಾಸಿಗೆಗಳಿದ್ದು, ಇಲ್ಲಿ ಹಾಸಿಗೆ ಹೆಚ್ಚಿಸುವ ಚಿಂತನೆಯೂ ಸರ್ಕಾರದ ಮುಂದಿದೆ ಎಂದು ಆರೋಗ್ಯ ಇಲಾಖೆ ನಿರ್ದೇಶಕ ಡಾ.ವಾಮದೇವ್ ತಿಳಿಸಿದ್ದಾರೆ.

ದುಬಾರಿ ದರ ಕಾಸಿಲ್ಲದವರಿಗೆ ಜ್ವರ

ಒಂದು ಬಾರಿ ಡಯಾಲಿಸಿಸ್‌ಗೆ ಸರ್ಕಾರಿ ಆಸ್ಪತ್ರೆಗಳಲ್ಲಿ 600-700 ರೂ.ವರೆಗೆ ಹಣ ಪಾವತಿಸಬೇಕಾ ಗುತ್ತದೆ. ಆದರೆ, ಇದೇ ಚಿಕಿತ್ಸೆಗೆ ಖಾಸಗಿ ಆಸ್ಪತ್ರೆಗಳು 1,500 ರಿಂದ 2 ಸಾವಿರ ರೂ.ವರೆಗೆ ಶುಲ್ಕ ಪಡೆಯುತ್ತಿವೆ. ಇದು ಬಡವರಿಗೆ ಹೊರೆಯಾಗಿದೆ.

ನೆಪ್ರೋಯುರಾಲಜಿಸ್ಟ್‌ಗಳ ಕೊರತೆ

ಸರ್ಕಾರ ಬರೀ ಡಯಾಲಿಸಿಸ್ ಕೇಂದ್ರ ತೆರೆದರೆ ಪ್ರಯೋಜನವಾಗುವುದಿಲ್ಲ.ನೆಪ್ರೋಯುರಾಲಜಿಸ್ಟ್‌ಗಳ ಕೊರತೆ ರಾಜ್ಯವನ್ನು ತೀವ್ರವಾಗಿ ಕಾಡುತ್ತಿದೆ. ಪ್ರಸ್ತುತ ರಾಜ್ಯದಲ್ಲಿ 100 ಮಂದಿ ಮಾತ್ರ ನೆಪ್ರೋಯುರಾಜಲಿಸ್ಟ್‌ಗಳಿದ್ದಾರೆ. ಈ ಕೊರತೆ ನೀಗಿಸಲು ಸರ್ಕಾರ ಹೆಣಗಬೇಕಿದೆ.

PREVIOUS

ಜಾಹಿರಾತು 11-3

NEXT

ಒಂದೇದಿನ 11.86 ಕೋಟಿ ತೆರಿಗೆ ಸಂಗ್ರಹ

Listen Music